ಉಷ್ಣವಲಯದ ವೈದ್ಯ

ಉಷ್ಣವಲಯದ ವಾಯುಗುಣಕ್ಕೂ ಜನರಿಗೂ ವಿಶಿಷ್ಟವಾಗಿರುವ ರೋಗರುಜಿನಗಳ ಪರಿಶೀಲನೆ, ಚಿಕಿತ್ಸೆ, ನಿರೋಧಗಳನ್ನು ಕುರಿತ ವೈದ್ಯಶಾಸ್ತ್ರದ ವಿಭಾಗ (ಟ್ರಾಪಿಕಲ್ ಮೆಡಿಸನ್). ಉಷ್ಣವಲಯದ ಅನೇಕ ರೋಗಗಳು ಅದಕ್ಕೇ ಮಿತಿಗೊಳ್ಳದೆ ಸಮಶೀತೋಷ್ಣವಲಯಗಳಲ್ಲೂ ಕಾಣುವುವು. ಉಷ್ಣವಲಯಕ್ಕೆ ವಿಶೇಷವಾಗಿರುವ ರೋಗಗಳೂ ಇಲ್ಲಿರುತ್ತವೆ. ಉಷ್ಣವಲಯದವೆಂದು ಕೆಲವು ರೋಗಗಳಿಗೆ ಹೆಸರಾಗಲು ಹಲವು ಕಾರಣಗಳಿವೆ.

ಹಿಂದಿನ ಕಾಲದಲ್ಲಿ ಈಜಿಪ್ಟ್, ಭಾರತ, ಚೀನ ದೇಶಗಳಲ್ಲಿ ವೈದ್ಯಶಾಸ್ತ್ರ ಆಗಿನ ಕಾಲಕ್ಕೆ ಬಹುಮಟ್ಟಿಗೆ ಮುಂದುವರಿದಿತ್ತು. ಇಂದು ಮುಂದುವರಿದ ನಾಡುಗಳು ಎನಿಸಿಕೊಂಡಿರುವವರಲ್ಲಿ ವೈದ್ಯ ಇಷ್ಟು ಬೆಳೆದಿರಲಿಲ್ಲ. 1415ರಲ್ಲಿ ಪೂರ್ವ ದೇಶಗಳಿಗೆ ದಾರಿ ಗೊತ್ತಾಗಿ, 15ನೆಯ ಶತಮಾನದ ಕೊನೆಯಲ್ಲಿ ಕೇಪ್ ಭೂಶಿರವನ್ನು ಸುತ್ತಿಕೊಂಡು ಪಶ್ಚಿಮದವರು ಪೂರ್ವ ದೇಶಗಳಿಗೆ ಬರುವಂತಾಯಿತು. ಕಂಡುಹಿಡಿದ ಹೊಸಹೊಸ ನಾಡುಗಳೊಡನೆ ವ್ಯಾಪಾರ ವಿನಿಮಯಗಳು ಹೆಚ್ಚಿದುವು. ಆಗ ಕೇವಲ ನೀರು, ಭೂಮಿಗಳ ಮೇಲೆ ಸಾಗಬೇಕಾಗಿತ್ತು. ಬಹಳ ಕಾಲದ ಹಡಗಿನ ಪ್ರಯಾಣದಲ್ಲಿ ಪ್ರಯಾಣಿಕರನ್ನು ನೋಡಿಕೊಳ್ಳಲು ವೈದ್ಯರು ನೇಮಕವಾಗಿದ್ದರು. ಹೀಗೆ ಬಂದುಹೋದ ವೈದ್ಯರಲ್ಲಿ ಬಹಳ ಮಂದಿ ಚುರುಕಾಗಿದ್ದು ತಾವು ಕಂಡ ಹೊಸ ವಿಷಯಗಳನ್ನೆಲ್ಲ ಗುರುತಿಸುತ್ತ ಬಂದರು. ಇನ್ನು ಕೆಲವರು ಇಲ್ಲೇ ನೆಲೆಸಿ ತಮ್ಮ ಅನುಭವಗಳನ್ನು ಬರೆದಿಟ್ಟರು. ಹೀಗೆ ಉಷ್ಣವಲಯದ ಭೂಗೋಳ, ಪ್ರಾಣಿಶಾಸ್ತ್ರ, ಸಸ್ಯಶಾಸ್ತ್ರ, ಜನರ ನಡೆವಳಿಕೆಗಳು, ನಂಬಿಕೆಗಳು, ರೋಗಗಳು, ವೈದ್ಯ ಪದ್ಧತಿಗಳ ವಿಚಾರಗಳು ರಾಶಿಬಿದ್ದುವು. ಪಶ್ಚಿಮ ದೇಶಿಗರು ಬಂದು ನೆಲೆಸಿ ತಮ್ಮ ಹುಟ್ಟೂರಲ್ಲಿ ಕಾಣದ, ಹೊಸದಾಗಿ ಕಂಡ, ರೋಗಗಳನ್ನೆಲ್ಲ ವಿವರಿಸಿದರು, ಈ ಹೊಸವನ್ನೆಲ್ಲ ಗುರುತಿಸುವಾಗ ಒಂದು ಹೊಸ ಹೆಸರು ಬೇಕಾಯಿತು. ಇಂಥವನ್ನು ಉಷ್ಣವಲಯದ ರೋಗಗಳು, ಉಷ್ಣವಲಯದ ವೈದ್ಯ ಎಂದರು.

ಕಳೆದ ಕೆಲವು ಶತಮಾನಗಳಿಂದ ಅನೇಕ ರೋಗಗಳ ಮಾದರಿಯೂ ಆಗುಳಿಕೆಯೂ ಬದಲಾಗಿದೆ. ಒಂದೆಡೆಯ ಜನರಲ್ಲಿ ನೆಲೆಸಿ ಆಗಾಗ್ಗೆ ತಲೆಯೆತ್ತುವ ಇಲ್ಲವೇ ಸಾಂಕ್ರಾಮಿಕಗಳಾಗಿ ಬರುವ ಬೇನೆಗಳು ಹಿಂದೆ ಪ್ರಪಂಚದಲ್ಲಿ ಎಲ್ಲೆಲ್ಲೂ ಕಾಣಿಸಿಕೊಳ್ಳುತ್ತಿದ್ದರೂ ಈಗೀಗ ಬಹುಮಟ್ಟಿಗೆ ಉಷ್ಣವಲಯದಲ್ಲಿ ಮಾತ್ರ ಇನ್ನೂ ತೋರುತ್ತಿವೆ. ಆ ಬಗೆಗಳ ರೋಗಗಳು ಮುಂದುವರಿದ ನಾಡುಗಳಲ್ಲಿ ಈಗ ಹೇಳಹೆಸರಿಲ್ಲದಂತೆ ಆಗಿರುವುದಕ್ಕೆ ಚಳಿ, ಕೊರೆವ ಹವೆಯೆ ಕಾರಣವಲ್ಲ. ತಪ್ಪದೆ ರೋಗಗಳ ಬೇರ್ಪಡಿಕೆ, ರೋಗ ತಡೆವ ಕ್ರಮಗಳು, ಜೀವನ ಮಟ್ಟದ ಏರಿಕೆ, ಚೆನ್ನಾದ ಚೊಕ್ಕಟಗೊಳಿಸುವಿಕೆ, ಆರೋಗ್ಯ ಸೂತ್ರಗಳ ಪಾಲನೆ ಒಳ್ಳೆಯ ಪುಷ್ಟಿ ಕೊಡುವ ಆಹಾರವೇ ಮುಖ್ಯ ಕಾರಣಗಳು.

ಉಷ್ಣವಲಯದ ರೋಗಗಳೆಂದು ಬೆಟ್ಟು ಮಾಡಿ ತೋರುವಂತೆ ಯಾವ ರೋಗಗಳ ಗೊತ್ತಾದ ಲಕ್ಷಣಗಳನ್ನೂ ಹೇಳುವಂತಿಲ್ಲ. ಹಾಗಾದರೆ ಎಂಥ ರೋಗಗಳನ್ನು ಉಷ್ಣವಲಯದವು ಎನ್ನಬೇಕು? ಉಷ್ಣವಲಯದಲ್ಲೆ ಇರುವವರು ಸಾಮಾನ್ಯವಾಗಿ ಅನುಭವಿಸುವ ರೋಗಗಳನ್ನು ಹೀಗೆ ಹೆಸರಿಸುವುದು ಮೊದಲು ಸರಿಯೆನ್ನಿಸಬಹುದು. ಆದರೆ ಪ್ರಪಂಚಲ್ಲಿ ಈಗಿನ ಸರಾಗವಾದ ಪ್ರಯಾಣಗಳ, ವಲಸೆಗಳ ಹೆಚ್ಚಿನ ಅನುಕೂಲಗಳು ಇರುವಾಗ ಉಷ್ಣವಲಯದವೆಂಬ ರೋಗಗಳು ಎಲ್ಲೆಲ್ಲೂ ಬೇಗನೆ ಹರಡಿಕೊಂಡಿವೆ. ಆದ್ದರಿಂದ, ಉಷ್ಣವಲಯದ್ದು ಎನ್ನುವುದು ಕೇವಲ ಕೃತಕ, ರೂಢಿ, ವಾಡಿಕೆ, ಹಳೆಯ ನಂಬಿಕೆಗಳಿಂದ ಈ ಹೆಸರು ಇನ್ನೂ ಉಳಿದಿದೆ ಅಷ್ಟೆ. ಉಷ್ಣವಲಯದಲ್ಲಿ ಕಾಣದ ರೋಗಗಳು ಬಹಳವಿಲ್ಲ. ಚಳಿ ದೇಶಗಳಲ್ಲಿನ ರೋಗಗಳು ಇಲ್ಲೂ ಅಷ್ಟೇ ಸಾಮಾನ್ಯ. ಉಷ್ಣವಲಯದಲ್ಲಿ ಎಲ್ಲೆಲ್ಲೂ ಬಹಳವಾಗಿರುವ ಕೆಲವು ಗೊತ್ತಾದ ಲಕ್ಷಣಗಳಿರುವ ರೋಗಗಳಿಗೆ ಈ ಹೆಸರು ಕೊಡುವುದೆಂದರೆ, ರೋಗಗಳು ಯಾವಾಗಲೂ ಒಂದೇ ತೆರನಾಗಿ ಇರವು ಎಂದುದನ್ನು ಗಮನಿಸಿಬೇಕು. ಉಷ್ಣಪ್ರದೇಶಗಳಲ್ಲಿ ಹಿಂದಿನಿಂದಲೂ ಬಹಳ ಸಾವುನೋವುಗಳಿಗೆ ಕಾರಣವಾಗಿದ್ದ ಮಲೇರಿಯದ ಪಿಡುಗು ಈಗ ಅಡಗಿಹೋಗುತ್ತಿದೆ. ಅಲ್ಲದೆ ಈ ರೋಗಗಳೂ ಒಂದೆಡೆಯಲ್ಲಿ ಇದ್ದವು ಇನ್ನೊಂದೆಡೆ ಇರವು. ಒಂದೊಂದು ಕಾಲದಲ್ಲೂ ಬಗೆಬಗೆಯಾಗಿ ಇರುತ್ತವೆ.

ಉಷ್ಣವಲಯದ ರೋಗಗಳಲ್ಲಿ ಎದ್ದು ಕಾಣುವ ಒಂದು ಗುಣವೆಂದರೆ, ಅವು ಒಂದು ಜೀವಿಯಿಂದ ಇನ್ನೊಂದಕ್ಕೆ ಸಾಗಣೆಯ ಕ್ರಮ. ಇದು ಸರಳವೂ ಅಲ್ಲ. ನೇರವೂ ಅಲ್ಲ. ಇಲ್ಲಿ ಪರಪಿಂಡಿಯೊಂದೇ ಅಲ್ಲ, ಸೋಂಕುವಾಹಕ ಕೀಟ, ನಡುವರ್ತಿ ಆಸರಿಗ ಇಲ್ಲವೇ ರೋಗಾಣುವಿನ ಆಗರ ಇವನ್ನೆಲ್ಲ ಗಮನಿಸಲೇಬೇಕು. ಗೊತ್ತಾದ ಸೋಂಕುವಾಹಕಗಳ ಸಂದಣೆ ಇರುವೆಡೆಗಳಲ್ಲಿ ಉಷ್ಣವಲಯದ ರೋಗಗಳು ಬಹು ಮಟ್ಟಿಗೆ ಹೆಚ್ಚಾಗಿರುವುವು. ಕೀಟಗಳಲ್ಲಿ ಬಹುಪಾಲು ಕೊಳಚೆ ಜಾಗಗಳು, ಹಳ್ಳಿ ಪಳ್ಳಿಗಳಲ್ಲೇ ನೆಲೆಸಿರುತ್ತವೆ. ಇವಲ್ಲಿ ಕೆಲವು ತಿಂಡಿ ತಿನಿಸುಗಳನ್ನು ಸೋಂಕಿಂದ ಕುಲಗೆಡಿಸುವುದು ಕೇವಲ ಇವುಗಳ ಕೊಳಕುತನದಿಂದ, ಆದರೆ ಇನ್ನು ಕೆಲವು ಬೇಗೆ, ಕಾವಿನಿಂದ ಎಷ್ಟೋ ವೇಳೆ ಮೈತುಂಬ ಬಟ್ಟೆ ಹೊದೆಯುವಂತಿಲ್ಲ. ತೆರೆದ ಭಾಗಗಳನ್ನು ಕೀಟಗಳು ಕಡಿಯಲು ಸೊಂಪು.

ಉಷ್ಣವಲಯದಲ್ಲಿ ಸೋಂಕುಗಳ ಮುಖ್ಯ ಮೂಲವಾಗಿರುವುದು ನೀರು, ಸೆಕೆ, ಬೆವರಿಕೆಗಳಿಂದ ದಿನವೂ ಮೈತೊಳೆದುಕೊಳ್ಳಬೇಕಾಗುತ್ತದೆ. ಕುಡಿಯಲೂ ಬಟ್ಟೆ ಒಗೆಯಲೂ ತೊಳೆಯಲೂ ಒಳ್ಳೆಯ ನೀರು ಬೇಕು. ಮಲಮೂತ್ರಾದಿಗಳಿಂದ ಕೊಳಕಾಗಿ ಸೋಂಕು ಒಬ್ಬರಿಂದೊಬ್ಬರಿಗೆ ಹರಡಲು ನೀರಿನಿಂದ ಇನ್ನೂ ಅನುಕೂಲ ಸುಲಭ.
ಉಷ್ಣವಲಯದಲ್ಲಿ ಸಾಮಾನ್ಯವಾಗಿರುವ ಸಮತೂಕದ ಆಹಾರದ ಕೊರೆಯಿಂದ ಜನರು ರೋಗಗಳಿಗೆ ಸುಲಭವಾಗಿ ತುತ್ತಾಗುವಂತಿರುವರು. ಜೀವನ ಮಟ್ಟ ಕಡಿಮೆ, ಅಲ್ಲದೆ ಅಪ್ಪಟ ಆಹಾರ ವಸ್ತುಗಳು ಸಿಗದೆ ಇನ್ನಷ್ಟು ಪುಷ್ಟಿಗೆಡುವರು. ಇದರಿಂದ ಅನೇಕರು ಆಹಾರದ ಪುಷ್ಟಿಯಲ್ಲಿ ಸುಮಾರು ಕೊರೆಗೀಡಾಗುತ್ತಿರುವರು.

ಉಷ್ಣವಲಯದ ರೋಗಗಳು ಬರುವುದಕ್ಕೂ ಇರುವುದಕ್ಕೂ ಹರಡುವುದಕ್ಕೂ ಹೋಗುವುದಕ್ಕೂ ಚಳಿದೇಶಗಳ ಹವೆಗಿಂತಲೂ ಹೆಚ್ಚಾಗಿ, ಒಂದು ನಾಡಿನ ಮಳೆ ಸುರಿತ, ನೀರಿನ ಪೂರೈಕೆಯ ವಿಧಾನ, ನೆಲದ ಲಕ್ಷಣ, ಪರಿಸರಗಳೇ ಮುಖ್ಯ ಕಾರಣಗಳು.

ಇನ್ನೂ ಹೆಚ್ಚಾಗಿ, ಮಾನವಿಕ ಅಂಶಗಳಿಂದ, ರೋಗಗಳು ನಿರ್ಧಾರವಾಗುತ್ತವೆ. ವರ್ಷವೆಲ್ಲ ಎಲ್ಲಾದರೂ ಒಂದುಕಡೆ, ಜಾತ್ರೆ, ಮೇಳ, ಯಾತ್ರೆ, ಯಾಗ, ಪೂಜೆ ಪುರಸ್ಕಾರಗಳಿಗಾಗಿ ಜನರು ಆಚಾರವಾಗಿ ಗುಂಪುಗೂಡುವರು. ಸರಳ ಆರೋಗ್ಯ ನಿಯಮಗಳನ್ನೂ ಪಾಲಿಸದ ಸಮಾಜದ ನಡೆವಳಿಕೆಗಳು, ಆರೋಗ್ಯದ ವಿಚಾರವಾಗಿ ಉದಾಸೀನತೆ, ತಿಳಿಗೇಡಿತನ, ಕುರುಡು ನಂಬಿಕೆಗಳು, ಬಡತನ(ಇವೆಲ್ಲ ಉಷ್ಣವಲಯದ ರೋಗಿಗಳಿಗೇ ಅಲ್ಲದೆ ಉಳಿದೆಲ್ಲವಕ್ಕೂ ಈಡಾಗಿಸುತ್ತವೆ. ಸಾವಿರಾರು ವರ್ಷಗಳಿಂದಲೂ ಭೂಮಿಯ ಮೇಲ್ಮೈ ಅಷ್ಟೇನೂ ಬದಲಾಗಿಲ್ಲ. ಒಂದೆಡೆಯ ಪ್ರಾಣಿ, ಸಸ್ಯಕೋಟಿಯೂ ಅಷ್ಟೇನೂ ಬದಲಾಯಿಸಿಲ್ಲ. ಬದಲಾವಣೆ ಆಗಿರುವುದೆಲ್ಲ ಜನರ ಸಮಾಜದ, ಹಣಕಾಸಿನ ಸ್ಥಿತಿಗಳಲ್ಲಿ ಮಾತ್ರ.

ಮೂಲಗಳನ್ನು ಗಮನಿಸಿದರೆ, ಉಷ್ಣವಲಯದ ರೋಗಗಳು ಮೂರು ಅಂಶಗಳಿಗೆ ಸಂಬಂಧಿಸಿವೆ ಎನ್ನಬಹುದು: ಸೋಂಕುವಾಹಕ, ಕೀಟವಾಹಕ, ಕೀಟವಾಹಕ ಕೀಟಗಳು, ನೀರಿನ ಪೂರೈಕೆ, ಆಹಾರದ ಒದಗಣೆ, ಆದ್ದರಿಂದ ಉಷ್ಣವಲಯದ ವೈದ್ಯ ಎಂದರೆ ವೈದ್ಯಶಾಸ್ತ್ರದಲ್ಲಿ ಭೂಗೋಳಕ್ಕೂ ಅಲ್ಲಿ ಹದಕ್ಕೂ ಸಂಬಂಧಿಸದೆ, ಜನರ ಜೀವನಮಟ್ಟ, ಚೊಕ್ಕತನದ ತಿಳಿವಳಿಕೆ, ಪಾಲನೆಗಳಿಗೆ ಸಂಬಂಧಿಸಿರುವುದು.

ಉಷ್ಣತೆಯ ಪರಿಣಾಮಗಳು: ಸುಡುತ್ತಿರುವ ಬಿಸಿಲಿಗೊಡ್ಡಿದ ಚರ್ಮ ಬಣ್ಣಗೆಡುವುದು. ಚರ್ಮದಲ್ಲಿ ಕಾರಳ್ಳು (ವಾರ್ಟ್), ಚರ್ಮದುರಿತ (ಡರ್ಮಟೈಟಿಸ್), ಏಡಿಗಂತಿ (ಕ್ಯಾನ್ಸರ್) ಆಗಬಹುದು. ಮೂತ್ರಮಂಡಲದಲ್ಲಿ ಕಲ್ಲುಗಳು ಕೂಡಬಹುದು. ವಿಪರೀತ ಬಿಸಿಲಿನ ಜಳಕ್ಕೆ ಮೈಯೊಡ್ಡಿದರೆ ಬಿಸಿಲಧಕ್ಕೆ (ಸನ್‍ಸ್ಟ್ರೋಕ್)ಲಾಗಿ ಜ್ವರ ಬರಬಹುದು, ಬೆವರು ಸಾಲೆ (ಪ್ರಿಕ್ಲಿಹೀಟ್) ಎದ್ದು ಗುಳ್ಳೆಗಳಾಗ ಬಹುದು. ಹುಡುಗಿಯರು 12-13 ವರ್ಷಗಳೊಳಗೇ ಮೈನೆರೆಯುವರು.

ವಿಷಕಾರಕಗಳು: ಕೆಲವು ಬಗೆಯ ಬೇಳೆಕಾಳುಗಳಿಂದ ತೊಗರಿಬೇಳೆ (ಲ್ಯಾತಿರಿಸಂ) ಆಗುತ್ತದೆ. ದತ್ತೂರದಂಥ ವಿಷಕಾರಕ ಗಿಡಗಳಿಂದ ಅಪ್ಪಿತಪ್ಪಿ ವಿಷವೇರಿಕೆ ಆಗುವುದು, ವಿಷಜಂತುಗಳಾದ ನಾಗರಹಾವು. ಕೊಳಕು ಮಂಡಳದ ಹಾವು, ಚೇಳು, ಜೇಡ, ವಿಷಮೀನು, ಜೇನುಹುಳು, ಜಿಗಣೆ ಮುಂತಾದುವುಗಳ ಕಡಿತಗಳು ಎಷ್ಟೋ ವೇಳೆ ಹಾನಿಕಾರಕ ಇಲ್ಲವೇ ಮಾರಕ.
ಸೋಂಕಿನ ರೋಗಗಳು: ಜನರ ಆಹಾರ ಪಾನೀಯಗಳಲ್ಲಿ ಎಚ್ಚರದಿಂದ ಚೊಕ್ಕಟತನ ಇಲ್ಲವಾದರೆ, ಕಾಲರ ವಿಷಮಶೀತಜ್ವರ (ಟೈಫಾಯ್ಡ್), ಆಮಶಂಕೆ, ಉಚ್ಚಾಟ, ಕಾಮಾಲೆಗಳ ತೆರನ ಸೋಂಕು ರೋಗಗಳು ರೋಗಿಗಳ ಮಲಮೂತ್ರಗಳಿಂದ ನೇರವಾಗೊ ಬಳಸಾಗೊ ತಿನ್ನುವ ಆಹಾರಗಳ ಮೂಲಕ ಅಂಟುತ್ತವೆ ಮುಖ್ಯವಾಗಿ ನೊಣಗಳು, ಎಲ್ಲೆಂದರಲ್ಲಿ ಮಲಮೂತ್ರ ಮಾಡುವಿಕೆ, ಕೊಳಕು ನೀರು, ಮೈ ಕೈಕಾಲುಗಳ ಕೊಳಕುತನ ರೋಗದಿಂದ ನರಳದ ರೋಗಾಣುಗಳೂ ಮುಖ್ಯಕಾರಣಗಳು, ಏಕಾಣುಜೀವಿಗಳು ಸೇರಿಬಿಟ್ಟು ಕೆಟ್ಟಿರುವ ಆಹಾರ ಸೇವನೆಯಿಂದ ವಾಂತಿಭೇದಿಗಳಾಗಿ ಕೆಲವು ವೇಳೆ ಮಾರಕವಾಗುವುದುಂಟು.
ರೋಗಿಗಳ ಹತ್ತಿರ ಇರುವವರಿಗೂ ಅಕ್ಕಪಕ್ಕದವರಿಗೂ ಹರಡುವ ರೋಗಗಳು ಸಿಡುಬು, ದಡಾರ, ಗಂಟಲಮಾರಿ (ಡಿಫ್ತೀರಿಯ) ಮಿದುಳುಪೊರೆಯುರಿತ (ಮೆನಿಂಜೈಟಿಸ್), ಮಂಗಬಾವು (ಮಂಪ್ಸ್), ಕ್ಷಯ, ಕುಷ್ಠ, ರವೆಗಟ್ಟು (ಟ್ರಾಕೋಮ), ಕಜ್ಜಿ, ತುರಿ, ಹುಳುಕಡ್ಡಿ (ರಿಂಗ್‍ವರ್ಮ್), ಮೇಹ ರೋಗಗಳು ಇವು ಕೊಳಚೆ ಪ್ರದೇಶಗಳಲ್ಲಿ ಸುಲಭವಾಗಿ ಹರಡುತ್ತ ಬೇರೂರುವುವು. ಕೆಲವು ವೇಳೆ ಸಾಂಕ್ರಾಮಿಕ ಮಟ್ಟಕ್ಕೇರುವುದೂ ಉಂಟು.

ಹಳದಿ ಜ್ವರ, ಡೆಂಗೆ, ಕಾಳಜ್ವರ (ಕಾಲಾ ಅಜಾóರ್) ಮಲೇರಿಯ, ಎಳೆಕೀಟ ಬೇನೆ (ಫೈಲೇರಿಯಾಸಿಸ್), ಇವು ಸೊಳ್ಳೆಗಳ ಕಡಿತದಿಂದಲೂ ಉಣ್ಣೆ, ಹೇನುಗಳು ಕಡಿಯುವದರಿಂದಲೂ ಸೊಕ್ಕಿನ (ಟೈಫಸ್) ಜ್ವರವೂ ಕ್ಯಾಸನೂರು ಕಾಡಿನ ಜ್ವರವೂ ಬರುತ್ತದೆ.

ಸಣ್ಣ ಪ್ರಾಣಿಗಳಿಂದ ಹರಡುವ ರೋಗಗಳು ಹಲವಾರಿವೆ: ಇಲಿಗಳು ಪ್ಲೇಗನ್ನು ರೋಗಿಯಿಂದ ಚೆನ್ನಾಗಿರುವವರಿಗೆ ಹತ್ತಿಸುತ್ತವೆ. ಕುಂದಿಲಿ ಜ್ವರ (ಟ್ಯುಲೆರೀಮಿಯ) ಕುಂದಿಲಿಗಳಿಂದಲೂ ಪುರುಳಿಬೇನೆ (ಸಿಟ್ಟಕೋಸಿಸ್) ಗಿಣಿಗಳಿಂದಲೂ ಆಡು, ದನ, ಹಂದಿಗಳಿಂದ ಬ್ರೂಸೆಲ್ಲಬೇನೆಯೂ (ಬ್ರೂಸೆಲ್ಲ ಬ್ರೂಸೆಲ್ಲೋಸಿಸ್) ದನ ಕುರಿಗಳಿಂದ ನೆರಡಿ (ಆಂತ್ರಾಕ್ಸ್) ರೋಗವೂ ಹಂದಿಗಳಿಂದ ನೀರ್ದೊಟ್ಟು ಜಿಟ್ಟಿಯೂ (ಹೈಡ್ಯಾಟಿಡ್ ಸಿಸ್ಟ್) ಬಾವಲಿ, ನರಿ, ನಾಯಿ ಕಡಿತಗಳಿಂದ ನಾಯಿ ಹುಚ್ಚೂ (ಹೈಡ್ರೊಫೋಬಿಯ) ಬರುವುವು.

ರಕ್ತ ಕೊರೆ, ಆಹಾರ ಕೊರೆ: ಉಷ್ಣವಲಯದ ರಕ್ತಕೊರೆಗೆ (ಅನೀಮಿಯ) ಹಲವಾರು ಕಾರಣಗಳಿವೆ. ಬಡತನದೊಂದಿಗೆ ದೊಡ್ಡ ಕುಟುಂಬವಿದ್ದರೆ ಆಹಾರ ಸಾಕಷ್ಟು ಎಲ್ಲರಿಗೂ ಸಿಗದೆ, ಪುಷ್ಟಿಗೆಟ್ಟು, ಆಹಾರದಲ್ಲಿ ಇರಬೇಕಾದ ಕಬ್ಬಿಣ, ಪ್ರೋಟೀನುಗಳು, ಜೀವಾತುಗಳ ಕೊರೆಯಿಂದ ಬರಬಹುದು. ಯೋಜನೆಯಿಲ್ಲದ ಕುಟುಂಬ ಬೆಳೆತದಿಂದ ಹೆಂಗಸು ಬಡಕಲಾಗಿ ಕ್ಷಯದ ತೆರನ ಮೇಹ ರೋಗಗಳಿಗೆ ಈಡಾಗುವಳು. ಕರುಳುಗಳಲ್ಲಿ ಕೊಕ್ಕೆ ಹುಳುಗಳು ಸೇರಿಕೊಂಡು ಗುಣಿತವಾದ ಮೇಲೆ ಒಳಗೇ ರಕ್ತ ಹೀರಿಬಿಡುವುದದರಿಂದಲೂ ರಕ್ತ ಕೊರೆ ಆಗುವುದು ಸಾಮಾನ್ಯ. ರಕ್ತ ಕೊರೆಗೆ ಮಲೇರಿಯ ಒಂದು ಸಾಮಾನ್ಯ ಕಾರಣವಾಗಿತ್ತು.

ಪ್ರೋಟೀನುಗಳ, ಮುಖ್ಯವಾಗಿ ಪ್ರಾಣಿಗಳಿಂದ ಬಂದವುಗಳ, ಕೊರೆಯಿಂದ ಬಡ ಕೂಸುಗಳಲ್ಲಿ ಕ್ವಾಷಿಯೊರ್ಕರ್ ಬರುತ್ತದೆ. ದೊಡ್ಡವರಲ್ಲಿ ಉಷ್ಣವಲಯದ ಭೇದಿ (ಸ್ಟ್ರೂ), ಈಲಿಯ ಅರಿಶಿನಾರಿಗೆ (ಲಿವರ್ ಸಿರ್ರೋಸಿಸ್) ಇವು ಹೆಚ್ಚು. ಜೀವಾತುಗಳ ಮಿತಿಮೀರಿದ ಕೊರೆಯಿಂದೇಳುವ ಕಾಯಿಲೆಗಳಲ್ಲ. ಉಷ್ಣವಲಯದಲ್ಲಿ ಅಪಾರ, ಬಡವರಲ್ಲೇ ಅಲ್ಲದೆ ಬಲ್ಲಿದಿದರಲ್ಲೂ ಈ ಕೊರೆಗಳು ಕಾಣಬರುತ್ತವೆ. ಬಡಬದಕಲು (ಬೆರಿಬೆರಿ), ಕಾರ್ದೊಗಲು (ಪೆಲ್ಲಾಗ್ರ), ಕೈಕಾಲೂರಿ, ಬಾಯಿಹುಣ್ಣು, ನರ ದುರ್ಬಲತೆಗಳೂ ನೀಚಗೊರೆ (ಸ್ಕರ್ವಿ). ಎಲಮುರುಟು (ರಿಕೆಟ್ಸ್), ಪಾರಪಟಲ ಮೆತುವೆ (ಕೆರಾಟೊಮೆಲೇಸಿಯ) ಇವು ಜೀವಾತುಗಳ ಕೊರೆಯಿಂದೆದ್ದ ಕಾಯಿಲೆಗಳು. ಸುಣ್ಣಾಂಶದ ಕೊರೆಯಿಂದ ಎಲುಕಳಲು (ಆಸ್ಟಿಯೊಮೇಲೆಶಿಯ) ಬಸುರಿ, ಬಾಣಂತಿಯರಲ್ಲಿ ಹೆಚ್ಚು.

ಪ್ರಪಂಚದ ಉಳಿದೆಡೆಗಳಲ್ಲಿ ಕಾಣಬರುವ ಗುಂಡಿಗೆ, ಕೀಲುರೋಗಗಳು ರಕ್ತನಾಳ ಬೇನೆಗಳು, ರಕ್ತದ ಒತ್ತಡವೇರಿಕೆ, ಸಿಹಿಮೂತ್ರ, ಪುಪ್ಪುಸದ ಕಾಯಿಲೆಗಳು, ನರಗಳ ಬೇನೆ ಏಡಿಗಂತಿಗಳು, ಇಲ್ಲೂ ಇವೆ. 				 
							      
(ಆರ್.ಡಿ.ಎಂ.)
(ಪರಿಷ್ಕರಣೆ: ನಾ. ಸೋಮೆಶ್ವರ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ